FackCheck; ಬಿಗ್ ಬಾಸ್ ಗೆ ಎರಡೇ ವಾರದಲ್ಲಿ ಬೀಗ್ ಎಂಬ ಸುದ್ದಿಗೆ ಸ್ಪಷ್ಟತೆ ಕೊಟ್ಟ ಕಿಚ್ಚ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಸಂಕಷ್ಟದಲ್ಲಿದೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟೂಡಿಯೋ ಮೇಲೆ ಜಲಮಾಲಿನ್ಯ ಮತ್ತು ಅನಧಿಕೃತ ಕಾರ್ಯಾಚರಣೆ ಆರೋಪದ ಹಿನ್ನೆಲೆಯಲ್ಲಿ, ರಾಮನಗರ ಜಿಲ್ಲಾ ಆಡಳಿತ ಮಂಗಳವಾರ ಸಂಜೆ ಸ್ಟೂಡಿಯೋಗೆ ಬೀಗ ಜಡಿದಿದೆ. ಇದರಿಂದಾಗಿ ನಟ ಕಿಚ್ಚ ಸುದೀಪ್ ನಡೆಸಿಕೊಡುವ ಈ ಸೀಸನ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಆಕಸ್ಮಿಕ ಕ್ರಮದ ನಂತರ, ಬಿಗ್ ಬಾಸ್ ಮನೆಯಲ್ಲಿ ಇದ್ದ 17 ಮಂದಿ ಸ್ಪರ್ಧಿಗಳನ್ನು ಈಗಲ್‌ಟನ್ ಗಾಲ್ಫ್ ವಿಲೇಜ್ ರೆಸಾರ್ಟ್‌ಗೆ ಸ್ಥಳಾಂತರ ಮಾಡಲಾಗಿದೆ. ರಹಸ್ಯತೆ ಕಾಪಾಡಲು ಸ್ಪರ್ಧಿಗಳಿಗೆ ಮೊಬೈಲ್, ಟಿವಿ ಹಾಗೂ ಬಾಹ್ಯ ಸಂಪರ್ಕಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಒಂದು ರಾತ್ರಿ ರೆಸಾರ್ಟ್‌ನಲ್ಲಿ ಕಳೆದ ಸ್ಪರ್ಧಿಗಳು ಇದೀಗ ಬಿಗ್ ಬಾಸ್ ತಂಡದ ನಿಗಾದಲ್ಲಿ ಇದ್ದಾರೆ.
ಸ್ಥಗಿತದ ಹಿಂದಿನ ಕಾರಣಗಳು ಗಂಭೀರವಾಗಿವೆ. ಸ್ಟೂಡಿಯೋಗೆ ಅಗತ್ಯವಾದ ಪರಿಸರ ಅನುಮತಿ ಇಲ್ಲದೆ ಶೋ ನಡೆಸಿರುವುದು, ತ್ಯಾಜ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವುದು, ಹಾಗೂ ಕೊಳಚೆ ನೀರನ್ನು ಸಂಸ್ಕರಿಸದೇ ಬಿಟ್ಟಿರುವ ಆರೋಪಗಳು ದಾಖಲಾಗಿವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎರಡು ಬಾರಿ ನೋಟಿಸ್ ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಬೀಗ ಹಾಕಲಾಗಿದೆ.
ಈ ಘಟನೆ ಬಿಗ್ ಬಾಸ್ ಇತಿಹಾಸದಲ್ಲಿ ಎರಡನೇ ಬಾರಿ ಶೋ ಸ್ಥಗಿತಗೊಳ್ಳಲು ಕಾರಣವಾಗಿದೆ. 2021ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಶೋ ನಿಂತಿದ್ದರೆ, ಈಗ ಪರಿಸರ ನಿಯಮ ಉಲ್ಲಂಘನೆ ಕಾರಣವಾಗಿದೆ.ಆಯೋಜಕರು ಇಂದು ಕೋರ್ಟ್‌ನಲ್ಲಿ ಸೀಜ್ ತೆರವಿಗೆ ಮನವಿ ಸಲ್ಲಿಸಲಿದ್ದಾರೆ. ಅನುಮತಿ ದೊರೆತರೆ ಶೋ ಮರುಪ್ರಾರಂಭವಾಗುವ ನಿರೀಕ್ಷೆ ಇದೆ. ಇಲ್ಲದಿದ್ದರೆ 12ನೇ ಸೀಸನ್ ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆ ಇದೆ.