ಡಾ ವಿಷ್ಣುವರ್ಧನ್ ಸಮಾಧಿ ನೆಲಸಮ, ಸ್ಥಳಕ್ಕೆ ಬಂದು ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಅಳಿಯ ಅನಿರುದ್ಧ
| Aug 9, 2025, 14:21 IST
ಡಾ.ವಿಷ್ಣುವರ್ಧನ್. ಕನ್ನಡ ಚಿತ್ರರಂಗದ ಯಜಮಾನ. ಸಾಂಸ್ಕ್ರತಿಕ ರಾಯಭಾರಿ. ಬದುಕಿದ್ದಷ್ಟು ದಿನ ಯಾರಿಗೂ ನೋವನ್ನ ನೀಡದ ಕರುಣಾಮಯಿ. ರೂಪ, ಅಭಿನಯ, ಸಂಸ್ಕಾರ, ಸಹನೆ, ಸರಳತೆ, ಸಹಿಸುವಿಕೆ, ಕ್ಷಮಿಸುವಿಕೆ ಎಲ್ಲದಕ್ಕೂ ಅತ್ಯುತ್ತಮ ಉದಾಹರಣೆಯೆನ್ನುವಂತಿದ್ದ ವಿಷ್ಣು ಆದರ್ಶಕ್ಕೆ ಮತ್ತೊಂದು ಹೆಸರು. ನಿಜ ಜೀವನದಲ್ಲಿ ಎಲ್ಲರನ್ನೂ ಗೌರವಿಸುತ್ತಾ, ಕಾಲ ಕಾಲಕ್ಕೆ ಅನೇಕ ತ್ಯಾಗಗಳನ್ನೂ ಮಾಡುತ್ತಾ, ಅವಮಾನಗಳನ್ನ ಎದುರಿಸುತ್ತಾ, ತನ್ನ ನೋವನ್ನ ತಾನೊಬ್ಬನೇ ನುಂಗಿಕೊಂಡು ಬದುಕನ್ನ ಜೀವಿಸಿ, ಎದ್ದು ಹೋದವರು ವಿಷ್ಣುವರ್ಧನ್.
ಇಂಥಾ ವಿಷ್ಣುವರ್ಧನ್ ಅಗಲಿ 16 ವರ್ಷಗಳಾಗಿವೆ. ಆದರೆ.. ಇವತ್ತು ಕೂಡ ವಿಷ್ಣು ಆತ್ಮಕ್ಕೆ ನೆಮ್ಮದಿ ಇಲ್ಲ. ವಿಷ್ಣುವರ್ಧನ್ ಹೆಸರಿಗೆ ಸಿಗಬೇಕಾದ ಗೌರವ ಸಿಕ್ತಿಲ್ಲ. ಇದಕ್ಕೆ ಜ್ವಲಂತ ಸಾಕ್ಷಿಯೆಂಬಂತೆ ''ಅಭಿಮಾನ್ ಸ್ಟುಡಿಯೋ''ದಲ್ಲಿದ್ದ ಡಾ ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋ ರಾತ್ರಿ ಧ್ವಂಸ ಮಾಡಲಾಗಿದೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ವಿಷ್ಣು ಸ್ಮಾರಕ ವಿಚಾರ ಇಂದು ನಿನ್ನೆಯದ್ದಲ್ಲ.ವರ್ಷಾಂತರಗಳ ಕಾಲ ವಿಷ್ಣು ಅಭಿಮಾನಿಗಳನ್ನು ಚಿಂತೆಯ ಮಡುವಿಗೆ ತಳ್ಳಿದ್ದ ವಿವಾದ ಇದು. ವಿಷ್ಣು ಅಭಿಮಾನಿಗಳೆಲ್ಲ ಬೆಂಗಳೂರಿನಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕೆಂಬ ಆಸೆ ಹೊಂದಿದ್ದರು. ''ಅಭಿಮಾನ್ ಸ್ಟುಡಿಯೋ''ವನ್ನೇ ತಮ್ಮ ದೇವಸ್ಥಾನ ಎಂದುಕೊಂಡಿದ್ದರು. ಪ್ರತಿ ವರ್ಷ ''ಅಭಿಮಾನ್ ಸ್ಟುಡಿಯೋ''ದಲ್ಲಿಯೇ ಹುಟ್ಟುಹಬ್ಬವನ್ನಾಚರಿಸುತ್ತಿದ್ದರು. ಪುಣ್ಯಸ್ಮರಣೆಯನ್ನು ಮಾಡುತ್ತಿದ್ದರು.
ಆದರೆ ಭಾರತಿ ಅವರು ಮಾತ್ರ ಮೈಸೂರಲ್ಲಿಯೇ ಸ್ಮಾರಕ ಬೇಕೆಂದು ಹಠ ಹಿಡಿದಿದ್ದರು. ಅದ್ರಂತೆ ಮೈಸೂರಿನಲ್ಲಿ 2.75 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣವೂ ಆಯ್ತು. ಆದರೆ ಈಗ ''ಅಭಿಮಾನ ಸ್ಟುಡಿಯೋ''ದಲ್ಲಿದ್ದ ಸ್ಮಾರಕವನ್ನೇ ನೆಲಸಮ ಮಾಡಲಾಗಿದೆ. 'ಹೈಕೋರ್ಟ್' ಸೂಚನೆ ಮೇರೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನ ರಾತ್ರೋರಾತ್ರಿ ತೆರವುಗೊಳಿಸಲಾಗಿದ್ದು, ಅಭಿಮಾನಿಗಳು ಈ ವಿಷಯ ಕೇಳಿ ಆಘಾತಕ್ಕೊಳಗಾಗಿದ್ದಾರೆ. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಘನವೆತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.