ಕೇವಲ ಮೂರೇ ದಿನಕ್ಕೆ 200 ಕೋಟಿ ದಾಟಿದ ಕಾಂತಾರ ಕಲೆಕ್ಷನ್, ಒಂದು ವಾರದಲ್ಲಿ 500 ಕೋಟಿ ಬರುತ್ತೆ ಎಂದ ತಜ್ಞರು
ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಯಶಸ್ಸು ಕಂಡಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಭಾರಿ ನಿರೀಕ್ಷೆಯ ಸಿನಿಮಾ ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾದರೂ, ಕೆಲವು ಕಡೆಗಳಲ್ಲಿ ಅಕ್ಟೋಬರ್ 1ರಿಂದಲೇ ಪೇಯ್ಡ್ ಪ್ರೀಮಿಯರ್ ಆರಂಭಗೊಂಡಿತ್ತು.
ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ‘ಕಾಂತಾರ’ ಮೊದಲ ಭಾಗವು 400 ಕೋಟಿ ರೂ.ಗಳಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಈಗ ಅದರ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ಕೂಡ ಅದೇ ರೀತಿಯ ದಾಖಲೆಯತ್ತ ಹೆಜ್ಜೆಯಿಡುತ್ತಿದೆ. ವರದಿಗಳ ಪ್ರಕಾರ, ಮೊದಲ ದಿನವೇ ಈ ಸಿನಿಮಾ ವಿಶ್ವಾದ್ಯಂತ ಸುಮಾರು 85+ ಕೋಟಿ ರೂ. ಗಳಿಕೆ ಮಾಡಿದೆ.
ಇದರಲ್ಲೂ ಕರ್ನಾಟಕದಿಂದಲೇ ಸುಮಾರು 20+ ಕೋಟಿ ರೂ. ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ. ಹಿಂದಿ ಮಾರ್ಕೆಟ್‌ನಿಂದ 18.50 ಕೋಟಿ ರೂ., ತೆಲುಗು ರಾಜ್ಯಗಳಿಂದ 13+ ಕೋಟಿ ರೂ., ತಮಿಳು ಮತ್ತು ಮಲಯಾಳಂ ಆವೃತ್ತಿಗಳಿಂದ 11+ ಕೋಟಿ ರೂ. ಗಳಿಕೆ ಆಗಿದೆ. ಅಲ್ಲದೆ ಪೇಯ್ಡ್ ಪ್ರೀಮಿಯರ್‌ಗಳಿಂದಲೇ 4+ ಕೋಟಿ ರೂ. ಬಂದಿದೆ.ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟಾರೆ 65+ ಕೋಟಿ ರೂ. ಗಳಿಕೆ ಆಗಿದೆ ಎನ್ನಲಾಗುತ್ತಿದ್ದು, ವಿದೇಶಿ ಮಾರುಕಟ್ಟೆ ಸೇರಿ ಒಟ್ಟು ಮೊತ್ತವು 85+ ಕೋಟಿ ರೂ. ದಾಟಿದೆ. ಇನ್ನೂ ಹೊಂಬಾಳೆ ಫಿಲ್ಮ್ಸ್ ಅಧಿಕೃತ ಅಂಕಿ-ಅಂಶ ಹೊರಬಿಡಬೇಕಿದೆ.
ಟಿಕೆಟ್ ಮಾರಾಟದಲ್ಲಿ ಹೊಸ ದಾಖಲೆ ಬರೆದಿರುವ ಈ ಚಿತ್ರ, ಬುಕ್ ಮೈ ಶೋನಲ್ಲಿ ಮೊದಲ ದಿನವೇ 12.80 ಲಕ್ಷ ಟಿಕೆಟ್‌ಗಳು ಮಾರಾಟವಾಗಿದೆ. ಪ್ರತಿ ಗಂಟೆಗೆ ಲಕ್ಷಾಂತರ ಜನರು ಟಿಕೆಟ್ ಬುಕ್ ಮಾಡುತ್ತಿರುವುದು ಗಮನಾರ್ಹ. ಶುಕ್ರವಾರ, ಶನಿವಾರ ಹಾಗೂ ಭಾನುವಾರದ ರಜೆ ಹಿನ್ನಲೆಯಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ 200+ ಕೋಟಿ ರೂ. ಕಲೆಕ್ಷನ್ ಮಾಡುವ ಸಾಧ್ಯತೆಗಳಿವೆ ಎಂದು ಟ್ರೇಡ್ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.