ಸಣ್ಣ ಪುಟ್ಟ ಪಾತ್ರ ಮಾಡಿ‌ ದಿನಕ್ಕೆ 200 ರೂಪಾಯಿ ದುಡಿಯುತ್ತಿದ್ದ ರಿಷಭ್ ಶೆಟ್ಟಿ ಇವತ್ತು ಕೋಟಿಯ ಒಡೆಯ

 | 
Rishab

ರಿಷಬ್ ಶೆಟ್ಟಿ ಇಂದು ಕನ್ನಡ ಸಿನಿಮಾ ಲೋಕದ ಹೆಮ್ಮೆಯ ಹೆಸರು. ಆದರೆ ಈ ಯಶಸ್ಸಿನ ಹಿಂದೆ ಕಷ್ಟ, ಹೋರಾಟ ಮತ್ತು ನಂಬಿಕೆಯ ಕಥೆ ಅಡಗಿದೆ. 1983ರ ಜುಲೈ 7ರಂದು ಕುಂದಾಪುರದ ಕೆರಾಡಿ ಗ್ರಾಮದಲ್ಲಿ ಜನಿಸಿದ ಪ್ರಶಾಂತ್ ಶೆಟ್ಟಿ, ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆಯುತ್ತಾ ಸಣ್ಣಪುಟ್ಟ ಕನಸು ಕಾಣುತ್ತಿದ್ದ ಹುಡುಗ. ಬಾಲ್ಯದಲ್ಲಿ 5ನೇ ತರಗತಿಯಲ್ಲಿ ಫೇಲ್ ಆದರೂ, ಜೀವನದಲ್ಲಿ ಎಂದಿಗೂ ಸೋಲನ್ನು ಒಪ್ಪಲಿಲ್ಲ.

ಡಾ. ರಾಜ್‌ಕುಮಾರ್ ಮತ್ತು ಉಪೇಂದ್ರ ಅವರಿಂದ ಪ್ರೇರಣೆ ಪಡೆದ ಪ್ರಶಾಂತ್, ಸಿನಿಮಾದ ಮೇಲೆ ಹುಚ್ಚು ಹುಟ್ಟಿಕೊಂಡು ಬೆಂಗಳೂರಿಗೆ ಬಂದು ಸಿನಿಮಾ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ಕಲಿಯಲು ಆರಂಭಿಸಿದರು. ದಿನದಲ್ಲಿ ತರಗತಿಗಳು, ರಾತ್ರಿ ವಾಟರ್ ಬಾಟಲ್ ಸಪ್ಲೈ ಕೆಲಸ – ಹೀಗೆ ಕಷ್ಟಪಟ್ಟು ತಮ್ಮ ಕನಸು ಬೆಳೆಸಿಕೊಂಡರು. ಈ ನಡುವೆ ಹಲವು ನಿರ್ದೇಶಕರೊಂದಿಗೆ ಸಹಾಯಕನಾಗಿ ಕೆಲಸ ಮಾಡಿ, ಸಿನಿಮಾ ಲೋಕದ ಅಂತರಂಗವನ್ನು ಅರಿತುಕೊಂಡರು.

ಹೆಸರು ಬದಲಾವಣೆ ತಂದೆಯ ಸಲಹೆಯಿಂದ “ರಿಷಬ್ ಶೆಟ್ಟಿ”ಯಾಯಿತು. ಇದೇ ವೇಳೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯನ್ನು ಭೇಟಿಯಾದರು. ಇವರ ಸ್ನೇಹದಿಂದ ಉಳಿದವರು ಕಂಡಂತೆ ಮತ್ತು ಕಿರಿಕ್ ಪಾರ್ಟಿ ಸಿನಿಮಾಗಳು ಹುಟ್ಟಿಕೊಂಡವು. ಕಿರಿಕ್ ಪಾರ್ಟಿಯ ಯಶಸ್ಸು ರಿಷಬ್‌ರನ್ನು ನಿರ್ದೇಶಕರಾಗಿ ಖ್ಯಾತಿಗೇರಿಸಿತು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಲಕ ರಾಷ್ಟ್ರೀಯ ಪ್ರಶಸ್ತಿ ಗಳಿಸಿದರು.

ಆದರೆ ಅವರ ನಿಜವಾದ ಚಮತ್ಕಾರ ಕಾಂತಾರ ಚಿತ್ರದೊಂದಿಗೆ ಜಗತ್ತಿಗೆ ತೋರಿಸಲ್ಪಟ್ಟಿತು. ನಟ, ನಿರ್ದೇಶಕ, ಕಥೆಗಾರ – ಎಲ್ಲ ಪಾತ್ರಗಳನ್ನೂ ನಿಭಾಯಿಸಿ, ಕನ್ನಡ ಸಿನಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು. ಕುಂದಾಪುರದ ಸಣ್ಣ ಹಳ್ಳಿಯಿಂದ ಆರಂಭವಾದ ಈ ಪ್ರಯಾಣ ಇಂದು ಭಾರತೀಯ ಚಿತ್ರರಂಗದಲ್ಲಿ ಪ್ರೇರಣೆಯಾಗಿದೆ.ರಿಷಬ್ ಶೆಟ್ಟಿಯ ಕಥೆ ನಮಗೆ ಹೇಳುವುದು – ಕನಸು ದೊಡ್ಡದಾಗಿರಲಿ, ಆದರೆ ಅದನ್ನು ಸಾಧಿಸಲು ಮನಸ್ಸು, ಶ್ರಮ, ನಂಬಿಕೆ ಇರಬೇಕು. ಪ್ರಶಾಂತ್ ಶೆಟ್ಟಿ ಇಂದು ರಿಷಬ್ ಶೆಟ್ಟಿಯಾಗಿ ಕನ್ನಡದ ಶಕ್ತಿಯನ್ನು ವಿಶ್ವದ ಮಟ್ಟಿಗೆ ತೋರಿಸಿದ್ದಾರೆ.