ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ರುಕ್ಮಿಣಿ ವಸಂತ್, ಭಾರತೀಯ ಆರ್ಮಿಯ ಎಂಟೆದೆ ವೀರ ಆಗಿದ್ದ ರುಕ್ಮಿಣಿ ತಂದೆ
ಸ್ಯಾಂಡಲ್‌ವುಡ್‌ನ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ ರಾಜಕುಮಾರಿ ಕನಕವತಿ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಆದರೆ ಅನೇಕರಿಗೆ ಗೊತ್ತಿಲ್ಲದ ಸಂಗತಿ ಎಂದರೆ, ಈ ಪ್ರತಿಭಾವಂತ ನಟಿಯ ತಂದೆ ಭಾರತದ ಅತ್ಯುನ್ನತ ಶೌರ್ಯ ಪುರಸ್ಕಾರವಾದ ಅಶೋಕ ಚಕ್ರವನ್ನು ಪಡೆದ ವೀರಸೈನಿಕ ದಿ. ಕರ್ನಲ್ ವಸಂತ್ ವೇಣುಗೋಪಾಲ್.
1967ರ ಮಾರ್ಚ್ 25ರಂದು ಬೆಂಗಳೂರಿನಲ್ಲಿ ಜನಿಸಿದ ವಸಂತ್ ವೇಣುಗೋಪಾಲ್ ತಮ್ಮ ಶಿಕ್ಷಣವನ್ನು ಉಡುಪಿ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಪೂರೈಸಿದರು. ಎನ್‌ಸಿಸಿಯಲ್ಲಿ ಸಕ್ರಿಯರಾಗಿದ್ದ ಅವರು 1988ರಲ್ಲಿ ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಪ್ರವೇಶ ಪಡೆದರು. ನಂತರ 1989ರಲ್ಲಿ ಮರಾಠ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟ್‌ಗೆ ಸೇರಿ ತಮ್ಮ ಸೈನಿಕ ಜೀವನ ಆರಂಭಿಸಿದರು. ಶಿಸ್ತು, ಧೈರ್ಯ ಮತ್ತು ದೇಶಭಕ್ತಿ ಅವರ ಅಸ್ತಿತ್ವವಾಗಿತ್ತು.
2007ರ ಜುಲೈ 30ರಂದು ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಉಗ್ರರನ್ನು ಎದುರಿಸುತ್ತಿದ್ದಾಗ ಅವರು ವೀರಮರಣ ಹೊಂದಿದರು. ಗುಂಡಿನ ಚಕಮಕಿಯ ವೇಳೆ ಸ್ವತಃ ಮುಂಚೂಣಿಯಲ್ಲಿ ನಿಂತು ತಮ್ಮ ಸೈನಿಕರನ್ನು ಪ್ರೇರೇಪಿಸಿದ ಅವರು, ಎಂಟು ಉಗ್ರರನ್ನು ಹೊಡೆದುರುಳಿಸಿದರು. ಅದೇ ಸಮಯದಲ್ಲಿ ಅವರಿಗೆ ಗುಂಡು ತಗುಲಿ ಅವರು ಹುತಾತ್ಮರಾದರು. ಅವರ ತ್ಯಾಗವನ್ನು ಗುರುತಿಸಿ, ಭಾರತ ಸರ್ಕಾರವು ಮರಣೋತ್ತರವಾಗಿ ಅಶೋಕ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ವೈಯಕ್ತಿಕ ಜೀವನದಲ್ಲೂ ವಸಂತ್ ಅತೀ ವಿನಯಶೀಲ ವ್ಯಕ್ತಿಯಾಗಿದ್ದರು. 1993ರಲ್ಲಿ ಭರತನಾಟ್ಯ ಕಲಾವಿದೆಯಾದ ಸುಭಾಷಿಣಿ ಅವರನ್ನು ವಿವಾಹವಾದರು. ಈ ದಂಪತಿಗೆ ರುಕ್ಮಿಣಿ ಮತ್ತು ಯಶೋದಾ ಎಂಬ ಇಬ್ಬರು ಪುತ್ರಿಯರು. ಪತಿಯ ವೀರಮರಣದ ಬಳಿಕ ಸುಭಾಷಿಣಿ ಅವರು ‘ವಸಂತರತ್ನ ಫೌಂಡೇಶನ್’ ಸ್ಥಾಪಿಸಿ ಹುತಾತ್ಮರ ಕುಟುಂಬಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇನ್ನು ಕಿರಿಯ ಮಗಳು ಯಶೋದಾ ಕಾಲೇಜು ಕಲಿಯುತ್ತಿದ್ದರೆ ರುಕ್ಮಿಣಿ ಅಲಿಯಾಸ್ ರುಕ್ಕು ಸಿನಿಮಾಗಳ ಮೂಲಕ ಹೆಮ್ಮೆಯ ಮನೆಮಗಳಾಗಿದ್ದಾಳೆ.