ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಿಡೋಕೆ ಮುಖ್ಯ ಕಾರಣ ಕೊಟ್ಟ ಸಂಜನಾ ಬುರ್ಲಿ, ಮುಖ್ಯ ವಿಚಾರಕ್ಕೆ ಆಸೆ ಪಟ್ಟ ಡೈರೆಕ್ಟರ್ ಎಂದ ನಟಿ

 | 
Sanjana

ಕೆಲ ವರ್ಷಗಳ ಕಾಲ ಕನ್ನಡದ ಕಿರುತೆರೆಯಲ್ಲಿ ಅಗ್ರ ಸ್ಥಾನದಲ್ಲಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದಿಂದ ಮನೆಮಾತಾದ ನಟಿ ಸಂಜನಾ ಬುರ್ಲಿ ಅಚ್ಚರಿಯಾಗಿ ಧಾರಾವಾಹಿಯನ್ನು ತೊರೆದಿದ್ದರು. ಅಭಿಮಾನಿಗಳಿಗೆ ಈ ನಿರ್ಧಾರ ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿತ್ತು – “ಸಂಜನಾ ಯಾಕೆ ಈ ರೀತಿ ಮಾಡಿದರು?” ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.

ಇನ್ನು ಸಂಜನಾ ಬುರ್ಲಿ ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸ್ನೇಹಾ ಪಾತ್ರ ನನಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ. ಈ ಪಾತ್ರದ ಮೂಲಕ ನಾನು ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದ್ದೇನೆ. ಆದರೆ, ನಾನು ಶಿಕ್ಷಣಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದುಕೊಂಡೆ. ಧಾರಾವಾಹಿ ಶೂಟಿಂಗ್‌ ಹಾಗೂ ನನ್ನ ಅಧ್ಯಯನ ಎರಡನ್ನೂ ಸಮತೋಲನಗೊಳಿಸುವುದು ಕಷ್ಟವಾಗಿತ್ತು. ಹೀಗಾಗಿ ಧಾರಾವಾಹಿಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡೆ.

ಇದರ ಜೊತೆಗೆ ಇನ್ನೊಂದು ಕಾರಣವೂ ಇದೆ, ಅದನ್ನು ಸಮಯ ಬಂದಾಗ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸಂಜನಾ ಬುರ್ಲಿ ಅವರ ಸ್ನೇಹಾ ಪಾತ್ರ ಕೇವಲ ಪಾತ್ರವಲ್ಲ, ಒಂದು ಪ್ರೇರಣಾದಾಯಕ ವ್ಯಕ್ತಿತ್ವವಾಗಿತ್ತು. ಬಡವರ ಮನೆಗೆ ಹುಟ್ಟಿದ್ದರೂ ಸ್ವಾಭಿಮಾನ, ಶಿಕ್ಷಣ ಹಾಗೂ ಧೈರ್ಯದಿಂದ ಬದುಕಬೇಕು ಎಂಬ ಸಂದೇಶವನ್ನು ಸ್ನೇಹಾ ಪಾತ್ರ ಸಾರುತ್ತಿತ್ತು. ಇದರಿಂದ ಸಂಜನಾ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

ಇದೀಗ ಅವರು ಶ್ರೀಗಂಧದಗುಡಿ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಚಂದನಾ ಎಂಬ ಹೊಸ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಧಾರಾವಾಹಿಗಳ ಜತೆಗೆ ಸಂಜನಾ ತಮ್ಮ ಶಿಕ್ಷಣಕ್ಕೂ ಆದ್ಯತೆ ನೀಡಿದ್ದಾರೆ. ಮೆಡಿಕಲ್‌ ಇಂಜಿನಿಯರಿಂಗ್‌ ಪೂರ್ಣಗೊಳಿಸಿದ ಅವರು ಈಗ ರಾಜ್ಯಶಾಸ್ತ್ರದಲ್ಲಿ ಮಾಸ್ಟರ್ಸ್‌ ಮಾಡುತ್ತಿದ್ದಾರೆ. ಮುಂದೆ ಪಿಎಚ್‌ಡಿ ಮಾಡುವ ಆಸೆಯೂ ಹೊಂದಿದ್ದಾರೆ.